ಕೋಕೋ ಉತ್ಪಾದನೆ ಮತ್ತು ವ್ಯಾಪಾರ

	ಕೋಕೋ ಬೆಳೆಗೆ ಸಮಭಾಜಕವೃತ್ತ ಪ್ರದೇಶ ಅತ್ಯಂತ ಸೂಕ್ತವಾದ್ದು. ಸಮಭಾಜಕವೃತ್ತಕ್ಕೆ ಉತ್ತರ ದಕ್ಷಿಣಗಳಲ್ಲಿ 200ಗೆ ಇದರ ಉತ್ಪಾದನೆ ಸೀಮಿತವಾಗಿದೆ. 

	ಕೋಕೋ ಉತ್ಪಾದನೆ ವಾರ್ಷಿಕವಾಗಿ ತೀವ್ರವಾದ ಏರಿಳಿತಗಳಿಗೆ ಒಳಗಾಗಿದೆ. 1950ರಲ್ಲಿ ಆಫ್ರಿಕಖಂಡದ ದೇಶಗಳಲ್ಲಿ ಹಲವಾರು ಕೋಕೋ ಗಿಡಗಳನ್ನು ನೆಟ್ಟುದರಿಂದ ಈಗ ಆ ದೇಶಗಳ ಕೋಕೋ ಉತ್ಪನ್ನ ಗಮನಾರ್ಹವಾಗಿ ಅಧಿಕವಾಗಿದೆ. ಕೋಕೋ ಬೀಜಗಳನ್ನು ಉತ್ಪಾದಿಸುತ್ತಿರುವ ಮುಖ್ಯ ದೇಶಗಳು ಘಾನ, ನೈಜೀರಿಯ, ಬ್ರಜಿóಲ್ ಮತ್ತು ಕ್ಯಾಮರೂನ್ಸ್. ಇವು 1968ರಲ್ಲಿ ಅನುಕ್ರಮವಾಗಿ 4,21,000, 2,35,000, 1,94,000 ಮತ್ತು 87,000 ಮೆಟ್ರಿಕ್ ಟನ್ ಬೀಜಗಳನ್ನು ಉತ್ಪಾದಿಸಿದುವು. ಕೋಕೋ ಉತ್ಪಾದಿಸುವ ಇತರ ದೇಶಗಳು ಐವರಿ ಕೋಸ್ಟ್ ಟೋಗೊ, ಗಯಾನ, ಮತ್ತು ಶ್ರೀಲಂಕಾ. ವಿಶ್ವದ ಒಟ್ಟು ಉತ್ಪನ್ನ 1968ರಲ್ಲಿ 13,39,000 ಮೆಟ್ರಿಕ್ ಟನ್ನುಗಳು. ಏಷ್ಯದಲ್ಲಿ ಕೋಕೋ ಬೆಳೆಗೆ ಸೂಕ್ತವಾದ ವಾಯುಗುಣ ಇಲ್ಲವಾದ್ದರಿಂದ ಅಲ್ಲಿ ಇದನ್ನು ಹೆಚ್ಚಾಗಿ ಉತ್ಪಾದಿಸುವುದಿಲ್ಲ. ಫಿಲಿಪೀನ್ಸ್, ಶ್ರೀಲಂಕಾ ಮತ್ತು ಇಂಡೋನೇಷ್ಯಗಳು ಮಾತ್ರ ಇದನ್ನು ಅಲ್ಪ ಪರಿಮಾಣಗಳಲ್ಲಿ ಉತ್ಪಾದಿಸುತ್ತವೆ. ನ್ಯೂ ಗಿನಿ, ಪಾಪ್ವ ಮತ್ತು ನ್ಯೂ ಹೆಬ್ರಿಡೀಸ್ಗಳಲ್ಲಿ ಕೋಕೋ ಉತ್ಪಾದನೆಗೆ ತಕ್ಕ ವಾಯುಗುಣ ಇದೆಯಾದರೂ ಕಾರ್ಮಿಕರ ಅಭಾವದಿಂದಾಗಿ ಅಲ್ಲಿ ಇದನ್ನು ಹೆಚ್ಚಾಗಿ ಉತ್ಪಾದಿಸುತ್ತಿಲ್ಲ.

	ವಿಶ್ವದ ಕೋಕೋ ಸರಬರಾಯಿಯಲ್ಲಿ ಸೇ.40ರಷ್ಟು ಬರುವುದು ಘಾನದಿಂದ. ಅಲ್ಲಿ ಕೋಕೋ ಬೆಳೆಗೆ ತಕ್ಕ ವಾಯುಗುಣವೂ, ಫಲವತ್ತಾದ ನೆಲವೂ ಇವೆ. ಜೊತೆಗೆ ಅಲ್ಲಿ ಕೋಕೋ ತೋಟಗಾರಿಕೆಯನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ. ಘಾನ ಹಳೆಯ ವ್ಯಾಪಾರಮಾರ್ಗದ ಮಧ್ಯೆ ಇರುವುದೂ ಅದರ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಅಭಿವೃದ್ಧಿ ಹೊಂದಿರುವುದೂ ಇತರ ಅನುಕೂಲಗಳು. 1850ರಿಂದ 1910ರ ವರೆಗೆ ಏಕ್ವಡಾರ್ ಪ್ರಮುಖ ಕೋಕೋ ಉತ್ಪಾದಕ ದೇಶವಾಗಿತ್ತು. ಅನಂತರ ಅದರ ಪ್ರಾಮುಖ್ಯ ಬ್ರಜಿಲ್‍ಗೆ ವರ್ಗವಾಯಿತು. ಆಮೇಲೆ ಪಶ್ಚಿಮ ಆಫ್ರಿಕದ ಕೋಕೋ ಬೆಳೆಯುವ ಪ್ರದೇಶ ಅಭಿವೃದ್ಧಿಯಾಗಿ ಅದಕ್ಕೆ ಅಗ್ರಪಟ್ಟ ಪ್ರಾಪ್ತವಾಯಿತು. ಎಕ್ವಡಾರಿನ ವಾಯುಗೂಣ ಮತ್ತು ನೆಲ ಕೋಕೋ ಬೆಳೆಗೆ ಅತ್ಯಂತ ಪ್ರಶಸ್ತವಾದ್ದು. ಆದರೆ ಅನಾರೋಗ್ಯಕರ ಪರಿಸ್ಥಿತಿಯಿಂದಾಗಿ ಅಲ್ಲಿ ಕೋಕೋ ಉತ್ಪಾದನೆ ಕ್ಷೀಣಿಸಿತು.

	ಕೋಕೋ ಉತ್ಪಾದಿಸುವ ಮುಖ್ಯ ದೇಶಗಳು ತಮ್ಮ ಬೆಳೆಯಲ್ಲಿ ಸೇ.90ಕ್ಕಿಂತ ಹೆಚ್ಚು ಭಾಗವನ್ನು ರಫ್ತು ಮಾಡುತ್ತವೆ. ಕೋಕೋ ಬಳಸುವ ದೇಶಗಳಲ್ಲಿ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಪ್ರಥಮ ಸ್ಥಾನ. ವಿಶ್ವದ ಒಟ್ಟು ಕೋಕೋ ಬೆಳೆಯಲ್ಲಿ ಸುಮಾರು 1/3 ಭಾಗ ಆ ದೇಶಕ್ಕೆ ರಫ್ತಾಗುತ್ತದೆ. ಪಶ್ಚಿಮ ಜರ್ಮನಿ, ನೆದರ್ಲೆಂಡ್ಸ್, ಸ್ಪೇನ್ ಮತ್ತು ಫ್ರಾನ್ಸ್ ಇತರ ಮುಖ್ಯ ಗ್ರಾಹಕ ರಾಷ್ಟ್ರಗಳು, ಸ್ಪೇನಿನಲ್ಲಿ ಕೋಕೋ ಒಂದು ಅವಶ್ಯ ವಸ್ತುವೆಂದು ಪರಿಗಣಿತವಾಗಿದೆ. ಸ್ವಿಟ್ಜರ್ಲೆಂಡ್ ಮತ್ತು ನೆದರ್ಲೆಂಡ್ಸ್ ಇದನ್ನು ಮುಖ್ಯವಾಗಿ ಚಾಕೊಲೆಟ್ ತಯಾರಿಕೆಗಾಗಿ ಆಮದು ಮಾಡಿಕೊಳ್ಳುತ್ತವೆ. 1966-67ರ ಕೋಕೋ ಆಯಾತ-ವಿರ್ಯಾತಗಳ ಮುಖ್ಯ ಅಂಕಿಅಂಶಗಳ ಈ ರೀತಿ ಇವೆ:

			 (ಸಾವಿರ ಮೆಟ್ರಿಕ್ ಟನ್‍ಗಳಲ್ಲಿ)
ದೇಶಗಳು
ನಿರ್ಯಾತ
ದೇಶಗಳು
ಆಯಾತ

ಬ್ರಜಿóಲ್
ಎಕ್ವಡಾರ್
ವೆನಜ್ವೇóಲ
ಐವರಿ ಕೋಸ್ಟ್
ಘಾನ
ನೈಜೀರಿಯ
112
32
12
124
397
193
ಫ್ರಾನ್ಸ್
ಪಶ್ಚಿಮ ಜರ್ಮನಿ
ನೆದರ್ಲೆಂಡ್ಸ್
ಬ್ರಿಟನ್ 
ಅಮೆರಿಕ ಸಂ.ಸಂ.
ಸ್ಪೇನ್ 
64
148
116
107
324
31

	ವಿಶ್ವ ಕೋಕೋ ವ್ಯಾಪಾರವನ್ನು ಅವಲೋಕಿಸಿದಲ್ಲಿ ಕಾಣುವ ಪ್ರಮುಖ ಅಂಶವೆಂದರೆ ಬೆಲೆಯ ಅಸ್ಥಿರತೆ. ಅನೇಕ ಸಾರಿ ಬೆಲೆಯ ತೀವ್ರ ಇಳಿತಾಯದಿಂದಾಗಿ, ರಫ್ತಿಗಾಗಿ ಮೀಸಲ್ಪಟ್ಟ ಕೋಕೋವನ್ನು ರಫ್ತು ಮಾಡದೆ ಕೊರತೆಯನ್ನು ಸೃಷ್ಟಿಸಿ, ಬೆಲೆಯ ಕುಸಿತವನ್ನು ತಡೆಯಬೇಕಾಗಿ ಬರುವುದುಂಟು. ಕೋಕೋ ವ್ಯಾಪಾರದಲ್ಲಿ ಕಾಣಬರುವ ಸಟ್ಟಾ ವ್ಯಾಪಾರದಿಂದಾಗಿ ಬೆಲೆಗೂ ಉತ್ಪತ್ತಿಗೂ ಯಾವ ಸಂಬಂಧವನ್ನೂ ಕಾಣಲಾಗುವುದಿಲ್ಲ. ಈ ಎಲ್ಲ ತೊಂದರೆಗಳನ್ನು ನಿವಾರಿಸಲು ಪ್ರಥಮ ಪ್ರಯತ್ನವಾಗಿ, ವಿಶ್ವಸಂಸ್ಥೆ 1966ರಲ್ಲಿ ಒಂದೇ ಸಮ್ಮೇಳನವನ್ನು ಕರೆದು ಅಂತರರಾಷ್ಟ್ರೀಯ ಕೋಕೋ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಸಲಹೆ ಮಾಡಿತು. 1963ರಲ್ಲಿ ಬ್ರಜಿóಲ್, ಕ್ಯಾಮರೂನ್ಸ್, ಘಾನ, ಐವರಿ ಕೋಸ್ಟ್, ನೈಜೀರಿಯ ಮತ್ತು ಟೋಗೋ ದೇಶಗಳು ಸೇರಿ ಕೋಕೋ ಉತ್ಪಾದಕರ ಸಂಘವನ್ನು ಸ್ಥಾಪಿಸಿಕೊಂಡುವು. ಬೆಲೆಯ ಸ್ಥಾಯಿಕರಣವೇ ಈ ಸಂಘದ ಮುಖ್ಯ ಉದ್ದೇಶ. 	 	(ಕೆ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ